ಕಾಸ್ಟಿನ್, ಮಿರಾನ್

 1633-1692. ರೂಮೇನಿಯದ ಚರಿತ್ರಕಾರ. ದೇಶದಲ್ಲಿಯ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಇವನ ಕುಟುಂಬದವರು ಪಡೋಲಿಯಕ್ಕೆ ಓಡಿಹೋಗಿದ್ದರು. ಅಲ್ಲಿ ಕಾಸ್ಟಿನ್ ವಿದ್ಯಾಭ್ಯಾಸ ಮಾಡಿ ನ್ಯಾಯಶಾಸ್ತ್ರದಲ್ಲಿ ಪದವಿ ಗಳಿಸಿ 1652ರಲ್ಲಿ ರೂಮೇನಿಯಕ್ಕೆ ಹಿಂದಿರುಗಿ ಅಲ್ಲಿ ಅನೇಕ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ. ಆದರೆ ಅರಸನೊಂದಿಗೆ ಮನಸ್ತಾಪ ಬಂದು ಮತ್ತೆ 1684ರಲ್ಲಿ ಪೋಲೆಂಡಿಗೆ ಹೋಗಬೇಕಾಯಿತು. ಮರುವರ್ಷ ಹಿಂದಿರುಗಿದರೂ ಅರಸನ ವಿರುದ್ಧ ಪಿತೂರಿ ಮಾಡಿದನೆಂದು 1692ರಲ್ಲಿ ಇವನ ತಲೆ ಕತ್ತರಿಸಿದರು.

 ಕಾಸ್ಟಿನನ ಕೆಲಸ ಎರಡು ರೀತಿಗಳಲ್ಲಿ ಮುಖ್ಯವಾದ್ದು. ರೂಮೇನಿಯರು ಲ್ಯಾಟಿನರ ವಂಶಕ್ಕೆ ಸೇರಿದವರು ಎಂಬ ಅಭಿಪ್ರಾಯವನ್ನು ಪ್ರತಿಪಾದಿಸಲು ಪ್ರಯತ್ನಿಸಿದವರಲ್ಲಿ ಇವನೇ ಮೊದಲಿಗ. ರೂಮೇನಿಯರ ದೇಶಾಭಿಮಾನವನ್ನು ಬಲಗೊಳಿಸಿ ಸ್ವತಂತ್ರ ಸಾಹಿತ್ಯದ ರಚನೆಗೆ ಮಾರ್ಗಮಾಡಿದ ಹಲವು ಶಕ್ತಿಗಳಲ್ಲಿ ಈ ಸಂಶೋಧನೆಯೂ ಒಂದು. ಎರಡನೆಯದಾಗಿ ರೂಮೇನಿಯದಲ್ಲಿ ಚಾರಿತ್ರಿಕ ವೃತ್ತಾಂತವನ್ನು ಸಾಹಿತ್ಯದ ಎತ್ತರಕ್ಕೇರಿಸಿದವನೀತ. ಈ ಕಾಲದ ಚಾರಿತ್ರಿಕ ಬರಹಗಾರರಲ್ಲಿ ಮೊದಲನೆಯ ಸ್ಥಾನ ಈತನದು. (ಇವನ ಮಗನಾದ ನೆಕುಲೈ ತಂದೆಯ ಕೆಲಸವನ್ನು ಮುಂದುವರಿಸಿದ. ವಿಶೇಷ ವಿದ್ವತ್ತು. ದೇಶಾಭಿಮಾನದೊಂದಿಗೆ ಪ್ರಾಮಾಣಿಕತೆಯಿಂದ ಸಂಗತಿಗಳನ್ನೂ ಘಟನೆಗಳನ್ನೂ ನಿರೂಪಿಸಬೇಕೆಂಬ ಶ್ರದ್ಧೆ-ಇವು ಈತನ ವೃತ್ತಾಂತಗಳಿಗೆ ಮಹತ್ತ್ವವನ್ನು ತಂದುಕೊಟ್ಟುವು.

 ದೇಶಾಭಿಮಾನ ಕಾಸ್ಟಿನನ ಚಾರಿತ್ರಿಕ ಕೃತಿಗಳ ಚೇತನವಾಗಿದ್ದಂತೆ ಅವನ ದೀರ್ಘ ಕವನ-ಮಾಲ್ಡೇವಿಯನ್ ಜನತೆಯನ್ನು ಕುರಿತು (1673) ಎಂಬುದಕ್ಕೂ ಚೇತನವಾಯಿತು. ರೋಮ್‍ನಗರದ ಸ್ಥಾಪನೆ, ಅದರ ಜೀವಂತ ಪ್ರಭಾವ ಇವು ಕವನದ ವಸ್ತು. ಇವನ ಮತ್ತೊಂದು ಕವನ ಜಗತ್ತನ್ನು ಕುರಿತದ್ದು.         

  (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ